1875ನೆಯ ಇಸವಿಯ ತನಕ ಸಂಪ್ರದಾಯನ್ಯಾಯ ಮತ್ತು ಸಾಮ್ಯನ್ಯಾಯಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ಜಾರಿ ಮಾಡುತ್ತಿದ್ದ ಬೇರೆಬೇರೆ ನ್ಯಾಯಾಲಯಗಳು ಕೆಲಸಮಾಡುತ್ತಿದ್ದುವು. ಆದರೆ ಹೆಚ್ಚಿನ ಮಟ್ಟಿಗೆ ಅವುಗಳೆರಡೂ ಸರಿಸಮಾನ ಮತ್ತು ಹೊಂದಿಕೆಯಾದ ನ್ಯಾಯಗಳನ್ನೇ ಚಲಾಯಿಸುತ್ತಿದ್ದುವು. ಸಾಮ್ಯನ್ಯಾಯಾನುಗಾಮಿ ಎಂಬುದು ಅದರ ಮೂಲತತ್ತ್ವ. ಆದರೂ ಒಂದೇ ವಿಚಾರದಲ್ಲಿ ಇವೆರಡೂ ಬೇರೆಬೇರೆಯಾಗಿದ್ದಲ್ಲಿ ಸಾಮ್ಯನ್ಯಾಯ ನಿಲ್ಲತಕ್ಕದ್ದೆಂದು ಆಗಿತ್ತು. 1875ರಲ್ಲಿ ಜಾರಿಗೆ ಬಂದ 1873ರ ನ್ಯಾಯ ನಿರ್ವಹಣ ಕಾಯಿದೆಯಲ್ಲಿ ಸಾಮ್ಯ ಮತ್ತು ಸಂಪ್ರದಾಯ ನ್ಯಾಯಾಲಯಗಳನ್ನು ಸಮನ್ವಯಗೊಳಿಸಿ ಹೈಕೋರ್ಟ್ ಆಫ್ ಜಸ್ಟಿಸ್ ಎಂಬ ಒಂದೇ ನ್ಯಾಯಾಲಯ ಸ್ಥಾಪಿತವಾಯಿತು. ಸಾಮ್ಯನ್ಯಾಯ ಮತ್ತು ಸಂಪ್ರದಾಯನ್ಯಾಯ ಇವುಗಳ ನಡುವೆ ವಿರೋಧವಿದ್ದಲ್ಲಿ ಸಾಮ್ಯನ್ಯಾಯವನ್ನು ಅನುಸರಿಸತಕ್ಕದ್ದೆಂದು ಅದರ 25ನೆಯ ವಿಧಿಯಲ್ಲಿ ಹೇಳಿದೆ. 1873ರ ನ್ಯಾಯ ನಿರ್ವಹಣೆಕಾಯಿದೆಯನ್ನು 1925ರ ಕಾಯಿದೆಯಿಂದ ತೆಗೆದುಹಾಕಿದೆ. ಅದರ 36ನೆಯ ವಿಧಿಯಲ್ಲಿ ಪರಮೋನ್ನತ ನ್ಯಾಯಾಲಯದ ಎಲ್ಲ ವಿಭಾಗಗಳೂ ಸಾಮ್ಯನ್ಯಾಯ ಮತ್ತು ಸಂಪ್ರದಾಯ ನ್ಯಾಯಗಳನ್ನು ಒಟ್ಟಿಗೆ ಚಲಾಯಿಸಲು ಹಕ್ಕುಳ್ಳವುಗಳಾಗಿವೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ